ಭಾರತದ ವೈಸರಾಯ್(1936-43) ಹಾಗೂ ವಿಲ್ಲಿಂಗ್‍ಡನ್‍ನ ಉತ್ತರಾಧಿಕಾರಿ. ಇವನು ಇಂಗ್ಲೆಂಡಿನ ಶ್ರೀಮಂತ ಮನೆತನದಲ್ಲಿ 1887ರಲ್ಲಿ ಜನಿಸಿದ. ಇವನ ಪೂರ್ಣ ಹೆಸರು ವಿಕ್ಟರ್ ಅಲೆಗ್ಸಾಂಡರ್ ಜಾನ್ ಹೋಪ್. ಕೃಷಿಕ್ಷೇತ್ರದಲ್ಲಿ ಅಪಾರ ಆಸಕ್ತಿಯುಳ್ಳವ ನಾಗಿದ್ದ ಇವನು ಕೃಷಿ ಉತ್ಪನ್ನಗಳ ಬೆಲೆ ಹಾಗೂ ವಿತರಣಾ ಸಮಿತಿಯ ಅಧ್ಯಕ್ಷನಾಗಿದ್ದ. 1928ರಲ್ಲಿ ಭಾರತದ ಕೃಷಿ ರಾಯಲ್ ಕಮಿಷನ್‍ನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ. 1933-34ರ ವರೆಗೆ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ಭಾರತಕ್ಕೆ ಸಂವಿಧಾನಾತ್ಮಕ ಸುಧಾರಣೆಗಳನ್ನು ತರಲು ನೇಮಿಸಿದ ಜಂಟಿ ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದ. ಈ ಸಮಿತಿಯ ವರದಿ 1935ರ ಭಾರತ ಸರ್ಕಾರ ಕಾಯಿದೆಗೆ ಬುನಾದಿಯಾಯಿತು.
ಇವನು ವಿಲ್ಲಿಂಗ್‍ಡನ್‍ನ ಉತ್ತರಾಧಿಕಾರಿಯಾಗಿ 1936 ಏಪ್ರಿಲ್‍ನಲ್ಲಿ ಭಾರತದ ವೈಸರಾಯ್ ಆಗಿ, 1943ರವರೆಗೆ ಕಾರ್ಯನಿರ್ವಹಿಸಿದ. 1935ರ ಕಾನೂನಿನಂತೆ ಇವನು ಚುನಾವಣೆಗೆ ಸ್ಪರ್ಧಿಸಿ ಬಹುಪಾಲು ಪ್ರಾಂತಗಳಲ್ಲಿ ಅಧಿಕ ಮತ ಪಡೆದು ಜಯಗಳಿಸಿದ(1937). ಭಾರತ ಸರ್ಕಾರದ ಕಾಯಿದೆಯು ಜಾರಿಗೆ ಬರುತ್ತಿದ್ದಂತೆ ಪ್ರಾಂತೀಯ ಸ್ವಾಯತ್ತತೆ ನೀಡುವುದು, ಭಾರತದ ಒಕ್ಕೂಟ ಸ್ಥಾಪನೆ ಹಾಗೂ ಭಾರತದಿಂದ ಬರ್ಮಾ ಪ್ರತ್ಯೇಕಿಸುವ ಜವಾಬ್ದಾರಿಯನ್ನು ಇವನು ಸಮರ್ಥವಾಗಿ ನಿರ್ವಹಿಸಿದ. ಅಖಿಲ ಭಾರತ ಒಕ್ಕೂಟ ಸ್ಥಾಪಿಸುವಲ್ಲಿ ದೇಶೀಯ ಸಂಸ್ಥಾನಗಳನ್ನು ಸಮರ್ಥವಾಗಿ ಸೇರಿಸುವ ಜವಾಬ್ದಾರಿಯಲ್ಲಿ ಇವನು ಸಫಲವಾಗಲಿಲ್ಲ. ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ತೀವ್ರ ಚಟುವಟಿಕೆಗಳು, ಅಖಿಲ ಭಾರತ ಮುಸ್ಲಿಮ್ ಲೀಗಿನ ವಿರೋಧ ಹಾಗೂ ಬ್ರಿಟಿಷ್ ಅಧಿಕಾರಿಗಳ ಪೂರ್ಣಬೆಂಬಲ ಸಿಗದಿದ್ದರಿಂದ ಇವನು ಈ ಕಾರ್ಯದಲ್ಲಿ ಹೆಚ್ಚು ಸಫಲನಾಗಲಿಲ್ಲ. 1939ರ ಹೊತ್ತಿಗೆ ಕೇವಲ ಐದನೆಯ ಎರಡು ಭಾಗದಷ್ಟು ರಾಜ್ಯಗಳು ಮಾತ್ರ ಒಕ್ಕೂಟದ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದ್ದುವು. 

ಎರಡನೆಯ ಮಹಾಯುದ್ಧ ಆರಂಭವಾಗುತ್ತಿದ್ದಂತೆ ಈತ ಬ್ರಿಟಿನ್ನಿನ ಪರವಾಗಿ ಭಾರತ ಹೋರಾಡುತ್ತದೆ ಎಂದು ಕಾಂಗ್ರೆಸ್ಸಿನ ಒಪ್ಪಿಗೆಯಿಲ್ಲದೆ ಘೋಷಿಸಿದ್ದು, ಭಾರತದ ರಾಜಕೀಯ ನಾಯಕರಲ್ಲಿ ತೀವ್ರ ಅತೃಪ್ತಿ ಮೂಡಿಸಿತು. ಯುದ್ಧಾನಂತರ ಭಾರತಕ್ಕೆ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಆಂತರಿಕ ಸ್ವಾಯತ್ತ ಸ್ಥಾನಮಾನ(ಡೊಮಿನಿಯನ್ ಸ್ಟೇಟಸ್) ನೀಡುವುದು ತಮ್ಮ ಗುರಿಯೆಂಬ ಇವನ ಹೇಳಿಕೆಯಿಂದ (1939 ಸೆಪ್ಟಂಬರ್ 17) ಕಾಂಗ್ರೆಸ್ಸಿಗೆ ಸಮಾಧಾನವಾಗಲಿಲ್ಲ. 1939ರಲ್ಲಿ ಕಾಂಗ್ರೆಸ್‍ನ ಎಲ್ಲಾ ಮಂತ್ರಿಮಂಡಲಗಳ ಸದಸ್ಯರು ರಾಜೀನಾಮೆ ನೀಡಿದರು. ಇದೇ ಸಮಯದಲ್ಲಿ ಮುಸ್ಲಿಮ್ ಲೀಗ್ ಪ್ರಬಲವಾಗಿ 1940ರ ಲಾಹೋರ್ ಅಧಿವೇಶನದಲ್ಲಿ ಪ್ರತ್ಯೇಕ ಪಾಕಿಸ್ತಾನ ನಿರ್ಣಯದ ಘೋಷಣೆ ಹೊರಡಿಸಿದ್ದರಿಂದ ಕಾಂಗ್ರೆಸ್ ಹಾಗೂ ಲೀಗ್ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಯಿತು. ಇಂಥ ಸಂದರ್ಭದಲ್ಲಿ ಒಂದು ಪಕ್ಷವನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟುವ, ಒಡೆದು ಆಳುವ ನೀತಿ ಪ್ರಯೋಗಿಸಿದ್ದರಿಂದ ಇವನು ಭಾರತೀಯರ ವಿಶ್ವಾಸ ಗಳಿಸಲಿಲ್ಲ. 1942ರಲ್ಲಿ ಕ್ರಿಪ್ಸ್ ಆಯೋಗ ಭಾರತಕ್ಕೆ ಬಂದಾಗಲೂ ಇವನು ಕಾಂಗ್ರೆಸ್ಸಿನ ಸಹಕಾರ ಪಡೆಯುವಲ್ಲಿ ವಿಫಲನಾದ.
ಎರಡನೆಯ ಮಹಾಯುದ್ಧ ಆರಂಭವಾಗುತ್ತಿದ್ದಂತೆ ಇವನು ಕೈಗೊಂಡ ಪ್ರಮುಖ ನೀತಿಗಳಿವು: ಯುದ್ಧ ಸಿದ್ಧತೆ ತೀವ್ರಗೊಳಿಸುವುದು ಹಾಗೂ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿತ್ವದ ಹಿತಾಸಕ್ತಿಗಳನ್ನು ಕಾಪಾಡಿಕೊ ಳ್ಳುವುದು, ಆಂತರಿಕ ಆಡಳಿತದಲ್ಲಿ ಗ್ರಾಮೀಣಾಭಿವೃದ್ಧಿ, ಪುರಾತತ್ತ್ವ ಇಲಾಖೆಯ ಬೆಳೆವಣಿಗೆ ಹಾಗೂ ಸಾಮ್ರಾಜ್ಯಶಾಹಿ ಬಂಡವಾಳದ ಹೆಚ್ಚಳ ಸಾಧಿಸುವುದು. ಬಂಗಾಲದಲ್ಲಿ ತೀವ್ರ ಬರಗಾಲ ತಲೆದೋರಿದಾಗ(1943) ಸಮರ್ಪಕ ಪರಿಹಾರೋಪಾಯ ಕೈಗೊಳ್ಳದೆ ಹಾಗೂ ಅಲ್ಲಿಗೆ ಭೇಟಿನೀಡದೆ ಪ್ರಜೆಗಳ ಅವಕೃಪೆಗೆ ಒಳಗಾದ. ಯುದ್ಧವಿರೋಧ, ವೈಯಕ್ತಿಕ ಸತ್ಯಾಗ್ರಹ, ಬ್ರಿಟನ್ ಪರಾಭವ, ಬರ್ಮಪತನ ಇವುಗಳ ಹಿನ್ನೆಲೆಯಲ್ಲಿ ನಡೆದ ಭಾರತಬಿಟ್ಟು ತೊಲಗಿ(ಕ್ವಿಟ್ ಇಂಡಿಯ) ಚಳವಳಿ ಮುಂತಾದವುಗಳಿಂದ ದೇಶದಲ್ಲಿ ಆಡಳಿತ ಕುಸಿಯುವ ಪರಿಸ್ಥಿತಿ ಉಂಟಾಯಿತು. 1943 ಅಕ್ಟೋಬರ್ 20ರಂದು ಇವನು ವೈಸರಾಯ್ ಹುದ್ದೆಯಿಂದ ನಿರ್ಗಮಿಸಿದ. ಇವನ ಆಳಿಕೆಯನ್ನು ಕುರಿತು ವಿ.ಪಿ.ಮೆನನ್ “ಏಳುವರೆ ವರ್ಷಗಳ ದೀರ್ಘ ಆಳಿಕೆಯಲ್ಲಿ ವೈಸರಾಯಿಯಾಗಿ ಯಾವುದೇ ಗುಣಾತ್ಮಕ ಸಾಧನೆ ಸಾಧಿತವಾಗಲಿಲ್ಲ’’ಎಂದೂ ತೇಜ್ ಬಹಾದ್ದೂರ್ ಸಫ್ರು-``ಲಿನ್‍ಲಿತ್ ಗೊನ ಏಳು ವರ್ಷಗಳ ಆಳಿಕೆಯ ಅನಂತರ ಭಾರತ ಮತ್ತಷ್ಟು ಛಿದ್ರಗೊಂಡಿದೆ” ಎಂದೂ ಅಭಿಪ್ರಾಯಪಟ್ಟಿದ್ದಾರೆ.	

(ಐ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ